ಶಾಮರಾಯ ಆಚಾರ್ಯ, ಕೆ
	(1926-) ಶಿಲ್ಪ ಕಲೆಯಲ್ಲಿ ನಿಷ್ಣಾತರಾದ ಶಿಲ್ಪಗುರು. ಇವರು ರಚಿಸಿದ ಶಿಲ್ಪಗಳೆಲ್ಲಾ ಶಾಸ್ತ್ರ ಶುದ್ಧಿಯೊಂದಿಗೆ ಸೌಂದರ್ಯ ಪೂರ್ಣ. ದೇವ ಪ್ರತಿಮೆ, ದೇವಾಲಯಗಳನ್ನು ನಿರ್ಮಾಣ ಮಾಡುವ ಸಾಂಪ್ರದಾಯಿಕ ಶಿಲ್ಪಿಗಳು ಆಧುನಿಕ ಶಿಲ್ಪಗಳನ್ನು ಮಾಡುವುದಿಲ್ಲ. ಶಾಮರಾಯರ ಆಚಾರ್ಯರು ಎರಡೂ ಶೈಲಿಯ ಶಿಲ್ಪಗಳನ್ನು ರಚಿಸುವಲ್ಲಿ ಸಿದ್ಧಹಸ್ತರು. ಶಾಮರಾಯರದು ಪಾರಂಪರಿಕ ಸುಸಂಕೃತ ಶಿಲ್ಪಿಗಳ ಮನೆತನ. ತಂದೆ ಜೋಗಪ್ಪ ಆಚಾರ್ಯ. ತಾಯಿ ಕಲ್ಯಾಣಿಯಮ್ಮ ಇವರ ಎರಡನೆ ಸಂತಾನ. ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಕಟಪಾಡಿ ಸಮೀಪದ ಕುರ್ನಾಲಿನಲ್ಲಿ ಜನ್ಮ 1926 ಫೆಬ್ರವರಿ 15 ರಂದು.

	ಜೋಗಪ್ಪ ಆಚಾರ್ಯರು ದಾರು, ಶಿಲಾ ಶಿಲ್ಪಪರಿಣತರು. ಶ್ರೀಮಂತರ ಮನೆ ನಕಾಸೆಯ ಬಾಗಿಲುವಾಡದ ರಚನೆ, ದೇವಾಲಯ ಹಾಗೂ ರಥಗಳ ದುರಸ್ಥಿ- ಹೀಗೆ ಬರುವ ಕರೆಗಳಿಗಾಗಿ ಕಾದು ಕೂರ ಬೇಕಾಗಿತ್ತು. ಕೆಲಸದ ನಿಮಿತ್ತ ಊರೂರು ಅಲೆದಾಡವುದು ಅನಿವಾರ್ಯವಾಗಿತ್ತು. ಕುಟುಂಬ ಹೀಗೆ ಕಾರ್ಕಳ ಪರಿಸರಕ್ಕೆ ವಲಸೆ ಬಂದಿತ್ತು, ಒಳ್ಳೆಯ ದಿನಗಳ ನಿರೀಕ್ಷೆಯಲ್ಲಿ. ಕಾರ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಕೊನೆಯ ಸರಕಾರಿ ಪರೀಕ್ಷೆಗೆ ಶಾಮರಾಯ ಕುಳಿತಕೊಳ್ಳುವುದಾಗಲಿಲ್ಲ ಜೋಗಪ್ಪಾಚಾರ್ಯರು ಪರೀಕ್ಷೆಯ ಫೀಸು ಒಂದು ಕಾಲು ರೂಪಾಯಿ ಕಟ್ಟಲು ಸಾಧ್ಯವಾಗಲಿಲ್ಲ. ಕಾರಣ ಶಿಲ್ಪಿಯ ಬಡತನ. ಶಾಲೆಯ ಓದು ಅಲ್ಲಿಗೆ ನಿಂತಿತು ಸರ್ಕಾರಿ ಶಾಲೆಯ ಓದು ನಿಂತರೂ ಭುವನೇಂದ್ರ ಸಂಸ್ಕøತ ವಿದ್ಯಾಪೀಠದಲ್ಲಿ ಸಂಸ್ಕøತ ಅಧ್ಯಯನ ಮುಂದುವರೆಸಿದರು. ಶಾಮರಾಯರು ಪ್ರಥಮ, ದ್ವಿತೀಯ ಅಡ್ವಾನ್ಸ್ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿ ಗಳಿಸಿದರು. ಈ ಅಧ್ಯಯನ ಶಾಮರಾಯರ ಕಲಾಜೀವನದಲ್ಲಿ ಮಹತ್ವದ ಪಾತ್ರವಹಿಸಿತು.

	ಶಿಲೆ ಮತ್ತು ಕಾಷ್ಠದಲ್ಲಿ ತಂದೆ ರಚಿಸುತ್ತಿದ್ದ ಶಿಲ್ಪಗಳ ಬಗೆಗೆ ಬಾಲ್ಯದಿಂದಲೇ ಆಕರ್ಷಿತರಾಗಿದ್ದರು. ಶಾಲೆಯ ಬಿಡುವಿನ ದಿನಗಳಲ್ಲಿ ತಂದೆಯ ಕೆಲಸ ಕಾರ್ಯಗಳಿಗೆ ನೆರವಾಗುವುದೇ ಒಂದು ಆಕರ್ಷಣೆ, ತಂದೆಯ ಮಗನ ಕಾರ್ಯವನ್ನು ತದೇಕ ಚಿತ್ತದಿಂದ ವೀಕ್ಷಿಸುತ್ತಿದರು. ತಂದೆಯ ಪ್ರೋತ್ಸಾಹದಿಂದ ಚಾಣ ಕೈಗೆತ್ತಿಕೊಂಡರು. ತಂದೆ ಜೋಗಪ್ಪಾಚಾರ್ಯರು ಮೊದಲ ಗುರುಗಳಾದರು. ಕಾರ್ಕಳದ ವೆಂಕಟರಮಣ ದೇವಾಲಯದ ಗರ್ಭಗುಡಿಯ ಜೀರ್ಣೋದ್ಧಾರ ಕಾರ್ಯ ಆರಂಭವಾದಾಗ, ಶಾಮರಾಯರು ದೇವಾಲಯದ ದಾರು ಪ್ರತಿಮೆಗಳ ದುರಸ್ಥಿಯನ್ನು ಶ್ರದ್ಧೆಯಿಂದ ನಿರ್ವಹಿಸಿದರು.

	ಆರಂಭದಲ್ಲಿ ತಂದೆಯವರ ಶಿಲ್ಪ ಕಾರ್ಯದಲ್ಲಿ ನೆರವಾಗುತ್ತಿದ್ದ ಶಾಮರಾಯರು, ಐದು ವರ್ಷಗಳ ಸಾಧನೆಯ ನಂತರ ಸ್ವತಂತ್ರವಾಗಿ ರಥ, ನಕಾಸೆ ಬಾಗಿಲುಗಳನ್ನು ರಚಿಸುವಷ್ಟು ಸಮರ್ಥರಾದರು. ಗೋಕರ್ಣನಾಥ ದೇವಾಲಯದ ರಥ, ಶಿಲಾದ್ವಾರ, ಮಹಾದ್ವಾರ, ಉಚ್ಚಿಲ ಮಹಾಲಕ್ಷ್ಮಿ ದೇವಾಲಯದ ರಥ, ಶರವು ಗಣಪತಿ ದೇವಾಲಯದ ಶಿವಾಲಯದ ಮಹಾದ್ವಾರ-ಇವು ಶಾಮರಾಯರ ಆರಂಭದ ಸ್ವತಂತ್ರ ಕಲಾಕೃತಿಗಳು.

	ದಕ್ಷಿಣ ಕನ್ನಡದ ರಂಜಾಳ ಗೋಪಾಲ ಶೆಣೈ- ಅಂತರರಾಷ್ಟ್ರೀಯ ಖ್ಯಾತಿಯ ಶಿಲ್ಪಿಗಳು. ತಮ್ಮ ಸಹಾಯಕರಾಗಿ ಬರಲು ಶೆಣೈ ಅವರಿಂದ ಬಂದ ಕರೆ, ಶಾಮರಾಯರ ಕಲಾಜೀವನದ ಒಂದು ಮುಖ್ಯ ಘಟ್ಟ. ಶೆಣೈ ಅವರ ಸಹಾಯಕರಾಗಿ 21 ವರ್ಷ (1947-1969) ದುಡಿದರು, ಕಟ್ಟಿಗೆ, ಪಂಚಲೋಹ ಚಿನ್ನ, ಬೆಳ್ಳಿ ಹೀಗೆ ಅನೇಕ ಮಾಧ್ಯಮಗಳಲ್ಲಿ ರಂಜಾಳ ಅವರಿಂದ ಯೋಗ್ಯ ಮಾರ್ಗದರ್ಶನ ಪಡೆದರು. 

	ರಂಜಾಳರ ಶುಭ ಹಾರೈಕೆಯೊಡನೆ ಕಾರ್ಕಳದಲ್ಲಿ ವಿಜಯ ಶಿಲ್ಪ ಕಲಾ ಕೇಂದ್ರ (1947) ಆರಂಭಿಸುವ ಮೂಲಕ ಸ್ವತಂತ್ರ ಬದುಕನ್ನು ಆರಂಭಿಸಿದರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಗಾರಾಧನೆಗೆ ಮಹತ್ವ. ನಾಗಪ್ರತಿಮೆಗಳಿಗೆ ಬೇಡಿಕೆ. ವಿಜಯ ಕಲಾ ಕೇಂದ್ರದಲ್ಲಿ ವೈವಿಧ್ಯಮಯ ನಾಗಪ್ರತಿಮೆಗಳನ್ನು ರಚಿಸ ತೊಡಗಿದರು. ನಾಗಾರಾಧಕರ ಪ್ರೋತ್ಸಾಹ ನಿರೀಕ್ಷೆಗೆ ಮೀರಿ ದೊರಕಿತು. ನಾಗಪ್ರತಿಮೆಗಳಲ್ಲದೆ ದೇವ ಪ್ರತಿಮೆಗಳಿಗೂ ಬೇಡಿಕೆ ಬಂತು. ಶಿಲ್ಪ ನಿರ್ಮಾಣ ಕಾರ್ಯ, ಹೆಚ್ಚಿದಾಗ, ಹೆಚ್ಚಿನ ಸ್ಥಳಾವಕಾಶ ಬೇಕಾಯಿತು ಚೊಲ್ಟಾಡಿಯಲ್ಲಿ ವಿಜಯ ಶಿಲ್ಪ ಶಾಲೆ ಆರಂಭಿಸುವುದು ಅನಿವಾರ್ಯವಾಯಿತು. ಅದು ಶಿಲ್ಪ ತಯಾರಿಕೆ, ಕೇಂದ್ರದ ಜೊತೆಗೆ, ಶಿಲ್ಪಿಗಳನ್ನು ಸೃಷ್ಟಿಸುವ ಶಾಲೆಯಾಗಿ ವಿಕಾಸಗೊಂಡಿತು. ಇನ್ನು ಮುಂದೆ, ಶಾಮರಾಯರು ನಡೆದ ಹಾದಿಯಲ್ಲಿ ಕಲ್ಲು ಮುಳ್ಳುಗಳಿಲ್ಲ.

	ಈ ಅವಧಿಯಲ್ಲಿ ಶಾಮರಾಯರು ಶಿಲ್ಪ ಶಾಸ್ತ್ರಾಧ್ಯಯನದ ಅವಶ್ಯಕತೆ ಮನಗಂಡರು. ವಾಸ್ತುತಜ್ಞ ಮುನಿಯಂಗಳ ಕೃಷ್ಣ ಭಟ್ಟ ಮತ್ತು ಸಂಸ್ಕøತ ವಿದ್ವಾನ್ ದೇವದಾಸರ ನೆರವಿನಿಂದ ತಂತ್ರ ಸಮುಚ್ಚಯ ರೂಪ ಮಂಡನ, ಕಾಶ್ಯಪ ಶಿಲ್ಪ ಮೊದಲಾದ ಶಿಲ್ಪ ಶಾಸ್ತ್ರ ಗ್ರಂಥಗಳ ಅಧ್ಯಯನ ಮಾಡಿದರು. ಮುಂದೆ ಶಾಮರಾಯರು ಶಿಲ್ಪಕಲಾ ಅಕಾಡೆಮಿಯ ಅಧ್ಯಕ್ಷರಾದಾಗ ಮೊದಲು ಮಾಡಿದ ಮಹತ್ವ ಕಾರ್ಯವೆಂದರೆ, ಶ್ರೀ ಕಾಶ್ಯಪ ಶಿಲ್ಪ ಶಾಸ್ತ್ರಂ ಕನ್ನಡ ಗ್ರಂಥದ ಪ್ರಕಟಣೆ. ಪ್ರತಿಮಾ ಲಕ್ಷಣ ತಾಳಮಾನ ಇತ್ಯಾದಿ ಶಿಲ್ಪ ರಹಸ್ಯಗಳನ್ನು ಶಿಲ್ಪಿಗಳು ಕನ್ನಡ ಮಾಧ್ಯಮದಲ್ಲಿ ಮನನ ಮಾಡಲು ಇದು ನೆರವಾಯಿತು. 

ಶಾಮರಾಯರು ಕಳೆದ ನಾಲ್ಕು ದಶಕಗಳಲ್ಲಿ ಐನೂರಕ್ಕಿಂತ ಹೆಚ್ಚು ಮಹತ್ವದ ಕಲಾಕೃತಿಗಳನ್ನು ನಿರ್ಮಿಸಿದ್ದಾರೆ. ನಾಡಿನ ಅಸಂಖ್ಯ ದೇವಾಲಯಗಳಲ್ಲಿ ಶಿಲ್ಪಾರಾಧಕರ ಮನೆ, ಮಂದಿರಗಳಲ್ಲಿ ಮಾತ್ರವಲ್ಲ, ಹಲವು ಶಿಲ್ಪಗಳು ಕಡಲನ್ನು ದಾಟಿ ಹೋಗಿವೆ. ಕೆನಡಾ, ಜಪಾನ್, ಲಂಡನ್ ಅಮೆರಿಕಗಳಲ್ಲಿ ಸ್ಥಾಪಿತಗೊಂಡಿವೆ. ಶಾಮರಾಯರಿಗೆ ರಾಷ್ಟ್ರ ಮಟ್ಟದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ತಂದು ಕೊಟ್ಟ ಕಲಾಕೃತಿಗಳು; ಜಪಾನಿನ ಪದ್ಮಾವತಿ ಯಕ್ಷಿ ಕುಕ್ಕುಟೋರಗ ವಾಹನ (11 1/2 ಅಡಿ) ಜಪಾನಿನ ಶಾಕುಂತಲ (4 ಅಡಿ) ದೆಹಲಿಯ ಮೆಹರೌಲಿಯ ಮಹಾವೀರ (13 1/2 ಅಡಿ) ರಾಜಸ್ಥಾನದ ಚಂದ್ರಪ್ರಭಾ ತೀರ್ಥಂಕರ (17 ಅಡಿ) ಮಧ್ಯಪ್ರದೇಶದ ವೃಷಭನಾಥ ತೀರ್ಥಂಕರ   (7 1/2 ಅಡಿ) ಪಡುಬಿದರೆಯ ವೀರಭದ್ರ (5 ಅಡಿ) ವಯನಾಡು ಜಿನ ಬಿಂಬ (5 ಅಡಿ) ಮುಂಬಯಿ ಗಣಪತಿ (3 1/2 ಅಡಿ) ಮುಂಬಯಿ ಪಂಚಲೋಹದ ತ್ರಿಭುವನೇಶ್ವರ (4 1/2) ಇವು ಕೆಲವು. ಕಾರ್ಕಳ ಮುಲ್ಕಿ, ಕುಂದಾಪುರ ಕಾಲೇಜುಗಳಲ್ಲಿ ಟಿ.ಎಂ.ಎ.ಪೈ. ಅವರ ಮೂರು ಪುತ್ಥಳಿಗಳು (3 1/2 ಅಡಿ) ಅಮ್ಮೆಂಬಳ ಸುಬ್ಬರಾವ್ ಪೈ (2 ಅಡಿ) ಇವೇ ಮೊದಲಾದ ಮಾನವ ಪುತ್ಥಳಿಗಳು ಸಹಜ ಸೌಂದರ್ಯದಿಂದ ಕೂಡಿವೆ, ಸಮಕಾಲೀನ ಜೀವನ ಚಿತ್ರಣದ ಎರಡು ಮಾದರಿಗಳು- ಕುರುಬ, ಮತ್ತು ಹಾವಾಡಿಗ,  ಇವೆರಡೂ ಕೃಷ್ಣ ಶಿಲೆಯ ನೈಜ ರೂಪದ ಶಿಲ್ಪಗಳು, ಆಚಾರ್ಯರ ಸಂಗ್ರಹದಲ್ಲಿವೆ. 

	ಕರ್ನಾಟಕದಲ್ಲಿ ಶಿಲ್ಪಕಲೆಯ ಹಾಗೂ ಶಿಲ್ಪಿಗಳ ಪುರೋಭಿವೃದ್ಧಿಯಲ್ಲಿ ಶಾಮರಾಯರಿಗೆ ಅಪಾರ ಆಸಕ್ತಿ, ಕರ್ನಾಟಕ ಶಿಲ್ಪ ಕಲಾ ಅಕಾಡೆಮಿ ಅಧ್ಯಕ್ಷರಾಗಿ, ಶಿಲ್ಪ ಕಲಾವಿದರಿಗೆ, ಜ್ಞಾನ ವಿಕಾಸಕ್ಕೆ ನೆರವಾಗುವಂತೆ ಕಲಾ ಶಿಬಿರಗಳನ್ನು, ವಿಚಾರ ಗೋಷ್ಠಿಗಳನ್ನು ಆಯೋಜಿಸಿದರು. ಪುಸ್ತಕಗಳ ಪ್ರಕಟಣೆ ಅವರು ಕೈಗೊಂಡ ಪ್ರಮುಖ ಕಾರ್ಯ.

	ಶಾಮರಾಯ ಆಚಾರ್ಯರಿಗೆ ದೊರೆತಿರುವ ಪ್ರಶಸ್ತಿಗಳು ಸನ್ಮಾನಗಳು ಅಸಂಖ್ಯ. 1991ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಲಿತಕಲಾ ಅಕಾಡೆಮಿ ಪ್ರಶಸ್ತಿ 1942ರಲ್ಲಿ ಕ್ವೀನ್ಸ್ ಲ್ಯಾಂಡ್‍ನಲ್ಲಿ ನಡೆದ ಭಾರತ ಉತ್ಸವದಲ್ಲಿ ಮುರಳಿಧರ ಕೃಷ್ಣ ಶಿಲ್ಪಕ್ಕೆ ಪ್ರಶಸ್ತಿ, ರಾಜ್ಯದ ಪ್ರತಿಷ್ಠಿತ ಜಕಣಾಚಾರಿ ಪ್ರಶಸ್ತಿ (1999) ಲಭ್ಯವಾಗಿದೆ. ಶಿಲ್ಪ ಶಿಕ್ಷಣಕ್ಕೆ ಆದ್ಯತೆ ನೀಡುವ ಆಚಾರ್ಯರು, ಜಕಣಾಚಾರಿ ಪ್ರಶಸ್ತಿಯ ಮೊತ್ತ ಜೊತೆಗೆ ಬಂದ ಒಂದು ಲಕ್ಷ ರೂಪಾಯಿಯನ್ನು ಇಡುಗಂಟಾಗಿ ಇಟ್ಟು, ಅದರಿಂದ ಲಭ್ಯವಾಗುವ ಬಡ್ಡಿಯನ್ನು ಶಿಲ್ಪಕಲಾ ಶಿಕ್ಷಣಕ್ಕೆ ಮೀಸಲಿಟ್ಟಿದ್ದಾರೆ. 

	ಕೇಂದ್ರ ಕರಕುಶಲ ಮಂಡಲಿ, ಆಚಾರ್ಯರನ್ನು 2003ನೇ ಸಾಲಿನ ಶಿಲ್ಪಗುರುವನ್ನಾಗಿ ಆಯ್ಕೆಮಾಡಿ, 10 ಶಿಲ್ಪಗಳು ರಚನೆ ಮಾಡಲು ಏಳೂವರೆ ಲಕ್ಷ ರೂಪಾಯಿ ಸಹಾಯಧನ ನೀಡಿದೆ. ಶಿಲ್ಪಗುರು ಪ್ರಶಸ್ತಿ ಪಡೆದವರಲ್ಲಿ ಶ್ಯಾಮರಾಯ ಆಚಾರ್ಯರು ಮೂರನೆಯವರು.				

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ